ದಂಬೋದ್ಭವ
ಒಬ್ಬ ಅರಸು. ಮಹಾಭಾರತದ ಉದ್ಯೋಗಪರ್ವದಲ್ಲಿ ಇವನ ವೃತ್ತಾಂತ ಬರುತ್ತದೆ. ತಾನೇ ದೊಡ್ಡವನೆಂಬ ಹೆಮ್ಮೆಯಿಂದ ಬೀಗುತ್ತಿದ್ದ ಈತ ಪ್ರತಿನಿತ್ಯವೂ ತನ್ನ ಸಭೆಗೆ ಬಂದವರನ್ನು ಈ ಲೋಕದಲ್ಲಿ ಯಾರಾದರೂ ಪರಾಕ್ರಮದಲ್ಲಿ ತನಗೆ ಸಮಾನರಾದವರು ಉಂಟೆ, ತಿಳಿಸಿ, ಎಂದು ಕೇಳುತ್ತಿದ್ದ. ಹೀಗಿರಲು ಒಂದು ದಿನ ಒಬ್ಬ ಬ್ರಾಹ್ಮಣ ಸಭೆಗೆ ಬಂದ. ರಾಜ ಎಂದಿನಂತೆ ಪ್ರಶ್ನೆ ಮಾಡಿದ. ಅದಕ್ಕೆ ಬ್ರಾಹ್ಮಣ ಗಂಧಮಾದನ ಪರ್ವತದಲ್ಲಿ ತಪಸ್ಸು ಕೈಗೊಂಡಿರುವ ನರ ನಾರಾಯಣರೆಂಬುವವರು ನಿನಗಿಂತಲೂ ಬಹು ದೊಡ್ಡ ಪರಾಕ್ರಮಿಗಳು ಅವರು ನಿನ್ನೊಂದಿಗೆ ಹೋರಾಡಲು ತಕ್ಕವರು ಎಂದು ತಿಳಿಸಿದ. ಈ ಪ್ರಶಂಸೆಯಿಂದ ಕೋಪಗೊಂಡ ರಾಜ ಕೂಡಲೇ ಸೈನ್ಯದೊಡನೆ ನರ ನಾರಾಯಣರಿರುವ ಸ್ಥಳವನ್ನು ಪ್ರವೇಶಿಸಿದ. ಅಲ್ಲಿ ಅವರು ನೀಡಿದ ಸ್ವಾಗತಕ್ಕೆ ಪ್ರತಿಯಾಗಿ ತನಗೆ ಬೇಕಾದದು ಯುದ್ಧಾತಿಥ್ಯ ಎಂದು ಹೇಳಿದ. ಆಗ ಅವರು ನಮ್ಮಲ್ಲಿ ಕ್ರೋಧದ ಸುಳಿವೇ ಇಲ್ಲವಲ್ಲ ! ಹೀಗಿರಲು ಯುದ್ಧ ಮಾಡುವುದೆಂದರೇನು - ಎಂದು ಹೇಳಿ ಹಿಡಿಯಷ್ಟು ದರ್ಭೆಗಳನ್ನು ತೆಗೆದುಕೊಂಡು ಮಂತ್ರಿಸಿ, ಈತನ ಸೇನೆಯ ಮೇಲೆ ಎರಚಿದರು. ಅದರಿಂದ ಸೈನ್ಯದಲ್ಲಿದ್ದವರಿಗೆಲ್ಲ ಕಣ್ಣು, ಮೂಗು, ಕಿವಿ ಮುಂತಾದ ಅವಯವಗಳು ಇಲ್ಲವಾದವು. ಆಗ ರಾಜ ಖಿನ್ನನಾಗಿ ನರನಾರಾಯಣರ ಕಾಲ ಮೇಲೆ ಬಿದ್ದು ತನ್ನ ದುರಭಿಮಾನ ಕಳೆಯಿತು, ಕ್ಷಮಿಸಿ-ಎಂದು ಕೇಳಿಕೊಂಡ. ಅನಂತರ ನರನಾರಾಯಣರು ಈತನಿಗೆ ನೀತಿಯನ್ನೂ ವಿವೇಕವನ್ನೂ ಹೇಳಿ ಕೊಟ್ಟು ಕಳುಹಿಸಿದರು.
(ಕೆ.ಆರ್.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ